ಆಮಂತ್ರಣ:
“ನಾವು ಕನ್ನಡಿಗರು - ನಮ್ಮ ಕನ್ನಡ” ಫೇಸ್ಬುಕ್ ಪುಟ ಅರ್ಪಿಸುವ ಉಚಿತ ಆನ್ಲೈನ್ ವಿಚಾರ ಸಂಕಿರಣ
“ಅಂತರಜಾಲವನ್ನು ಸದುಪಯೋಗಪಡಿಸಿಕೊಂಡು ಬದುಕನ್ನು ಶ್ರೀಮಂತಗೊಳಿಸುವುದು ಹೇಗೆ?” (ಕಿರು ಸರಣಿಯ ಮೂರನೇ ಕಂತು)
ದಿನಾಂಕ: 24-09-2022 ಶನಿವಾರ ಸಂಜೆ 6.00ರಿಂದ
ವಿಷಯ: “ಭಾಷೆ ಮತ್ತು ಸಾಹಿತ್ಯದ ಸೇತುವೆಯಾಗಿ ಅಂತರ್ಜಾಲ”
ಉಪನ್ಯಾಸಕರು: ಶ್ರೀ ಓಂಶಿವಪ್ರಕಾಶ್ ಎಚ್. ಎಲ್.; ವಿಕಿಪೀಡಿಯನ್, ಸಹ ಸಂಚಾಲಕರು: ಸಂಚಯ ಹಾಗೂ ಸಂಚಿ ಫೌಂಡೇಷನ್, ಮುಕ್ತ ತಂತ್ರಾಂಶ ಹಾಗೂ ಮುಕ್ತ ಜ್ಞಾನ ಪ್ರಚಾರಕರು
ಪರಿಕಲ್ಪನೆ, ಸಂಯೋಜನೆ, ಸಮನ್ವಯ: ಶ್ರೀ ನಟರಾಜ ಉಪಾಧ್ಯ
ಯಕ್ಷವಾಹಿನಿ® ಸಹಕಾರದಲ್ಲಿ ಜ್ಹೂಮ್ ವೇದಿಕೆಯ ಕೊಂಡಿ: https://us02web.zoom.us/j/85625197504
ಫೇಸ್ಬುಕ್‌ನಲ್ಲಿ ನೇರ ಪ್ರಸಾರ: https://www.facebook.com/nupadhya/
ಬನ್ನಿ!
ಉಪನ್ಯಾಸಕರ ಕಿರು ಪರಿಚಯ:
ಶ್ರೀ ಓಂಶಿವಪ್ರಕಾಶ್ ಎಚ್. ಎಲ್. ಅವರು ಮೂಲತಃ ಬೆಂಗಳೂರಿನವರು. ಕಳೆದ ೧೮ ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶಿಕ್ಷಕನಾಗಿ, ತಂತ್ರಜ್ಞನಾಗಿ, ತಂತ್ರಜ್ಞಾನ ನಿರ್ವಾಹಕನಾಗಿ ವ್ಯಾವಹಾರಿಕ ಅಭಿವೃದ್ಧಿಯ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಈಗ ತನ್ನದೇ ಸ್ಟಾರ್ಟಪ್ ನೆಡೆಸುತ್ತಿದ್ದು, ಕನ್ನಡ ಹಾಗೂ ಭಾರತೀಯ ಭಾಷೆಗಳ ಸುತ್ತ ಒಂದಷ್ಟು ಡಿಜಿಟಲೀಕರಣದ ಸೇವೆಗಳನ್ನು ಹೊರತರಲು ಶ್ರಮಿಸುತ್ತಿದ್ದಾರೆ.
೨೦೦೬ ರಿಂದ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ (Free & Open Source Software) ಬಗ್ಗೆ ಕನ್ನಡದಲ್ಲಿ ಲಿನಕ್ಸಾಯಣ.ನೆಟ್ ನಲ್ಲಿ ಬರೆಯುತ್ತಿದ್ದು - ಇಂದಿಗೂ ಇದರ ಎಲ್ಲ ಲೇಖನಗಳು ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್‌ನಡಿ ಲಭ್ಯವಿವೆ. ಕನ್ನಡ ತಂತ್ರಜ್ಞಾನವನ್ನು ಸರಳವಾಗಿ ತಿಳಿಸುವುದು ಹಾಗೂ ಪ್ರಚುರಪಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಈ ಬರವಣಿಗೆ ಮುಂದೆ ಸ್ವತಂತ್ರ ತಂತ್ರಾಂಶದ ಸುತ್ತ ಕನ್ನಡವನ್ನು ಚಳುವಳಿಯ ರೂಪದಲ್ಲಿ ಬದಲಿಸಿ - ಗ್ನು/ಲಿನಕ್ಸ್ ಹಬ್ಬ, ವಿಕಿಪೀಡಿಯಾ ಸಂಪಾದನೋತ್ಸವಗಳು ಇತ್ಯಾದಿಗಳನ್ನು ಅನೇಕ ಸಮಾನ ಮನಸ್ಕರೊಂದಿಗೆ ನೆಡೆಸಿಕೊಂಡು ಬರಲು ಪ್ರೇರೇಪಿಸಿತು.
೨೦೧೦ ರಿಂದ ಸಂಚಯ - ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ ಮೂಲಕ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ವಚನ ಸಂಚಯ, ದಾಸ ಸಂಚಯ, ಸರ್ವಜ್ಞ ಸಂಚಯ, ರನ್ನ ಜನ್ನ ಹೀಗೆ ಹತ್ತು ಹಲವು ಕನ್ನಡ ಸಾಹಿತ್ಯ ಪ್ರಕಾರಗಳನ್ನು ಜನ ಸಾಮಾನ್ಯನು ತಾನೇ ಸಂಶೋಧಿಸುವಂತೆ ಸಹಕರಿಸುವ ಪರಿಕರಗಳನ್ನು ಇಂಟರ್ನೆಟ್ ಮೂಲಕ ಕನ್ನಡಿಗರಿಗೆ ಲಭ್ಯವಾಗಿಸುತ್ತಿದ್ದಾರೆ. ತಂತ್ರಾಂಶಗಳಲ್ಲಿ ಕನ್ನಡದ ಸುತ್ತ ಬಳಸಬೇಕಿರುವ ಶಿಷ್ಟತೆಗಳನ್ನು ಇವರು ಸೃಷ್ಟಿಸಿದ ತಂತ್ರಾಂಶಗಳಲ್ಲಿ ಬಳಸಿ ತೋರಿಸುವ ಮೂಲಕ ಉದಾಹರಣೆ ಆಗುತ್ತಿರುವುದು ಸಂಚಯದ ವಿಶೇಷ. ಹಳೆಯ ಕನ್ನಡದ ಪುಸ್ತಕಗಳನ್ನು ಡಿಜಿಟಲೀಕರಿಸುವುದು, ಮುಕ್ತವಾಗಿ ಸಮುದಾಯ ಸಹಭಾಗಿತ್ವದ ಕೆಲಸಗಳನ್ನು ನಿರ್ವಹಿಸುವುದು ಸಂಚಯದ ಇತರೆ ಕಾರ್ಯಚಟುವಟಿಕೆಗಳು.
೨೦೧೪ರಲ್ಲಿ ಸ್ನೇಹಿತರೊಟ್ಟಿಗೆ ಕಟ್ಟಿದ ವಾಣಿಜ್ಯೇತರ ಸಂಸ್ಥೆ - ಸಂಚಿ ಫೌಂಡೇಷನ್ - ಕಲೆ, ಸಾಹಿತ್ಯ, ಇತಿಹಾಸ ಇತ್ಯಾದಿಗಳನ್ನು ಆಡಿಯೋ ಹಾಗೂ ವಿಡಿಯೋ ಮಾಧ್ಯಮದಲ್ಲಿ ಡಿಜಿಟಲೀಕರಿಸುತ್ತಾ, ಕನ್ನಡ ಸಂಸ್ಕೃತಿಯ ಶಾಶ್ವತ ದಾಖಲೀಕರಣಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿದೆ.